ಸತ್ಯ ಅಸತ್ಯಗಳನ್ನು ನೀನು ವಿವೇಚಿಸಬೇಕು. ಯೋಚನೆ, ಮಾತು, ಕೆಲಸ ಎಲ್ಲದರಲ್ಲಿಯೂ ಪೂರ್ತ ಸತ್ಯವಂತನಾಗಿರುವುದನ್ನು ನೀನು ಕಲಿಯಬೇಕು. ಯೋಚನೆಯಲ್ಲಿ ಮೊದಲು ಇದು ಸುಲಭವಲ್ಲ. ಏಕೆಂದರೆ ಲೋಕದಲ್ಲಿ ಅನೇಕ ಸುಳ್ಳು ಅಭಿಪ್ರಾಯಗಳೂ ಅವಿವೇಕಯುಕ್ತವಾದ ಮೂಢಭಾವನೆಗಳೂ ನೆಲೆಯಾಗಿವೆ. ಇವುಗಳ ಹಿಡಿತಕ್ಕೆ ಸಿಕ್ಕಿದವರು ಯಾರೂ (ಯೋಗಮಾರ್ಗದಲ್ಲಿ) ಮುಂದುವರಿಯಲಾರರು. ಆದ್ದರಿಂದ ಒಂದು ಅಭಿಪ್ರಾಯವನ್ನು ಅನೇಕ ಜನರು ಸರಿ ಎಂದು ತಿಳಿದಿದ್ದಾರೆ. ಶತಮಾನಗಳಿಂದ ಜನರು ಅದನ್ನು ಸತ್ಯವೆಂದು ನಂಬಿದ್ದಾರೆ, ಅಥವಾ ಜನರು ಶ್ರೇಷ್ಠವೆಂದು ಭಾವಿಸುವ ಗ್ರಂಥದಲ್ಲಿ ಅದು ಬರೆಯಲ್ಪಟ್ಟಿದೆ ಎಂಬ ಕಾರಣಗಳ ಮಾತ್ರಕ್ಕೇನೆ ಆ ಅಭಿಪ್ರಾಯವನ್ನು ಸರಿಯೆಂದು ನೀನು ಅಂಗೀಕರಿಸಕೂಡದು. ಆ ವಿಷಯವನ್ನು ನೀನೇ ಯೋಚಿಸಬೇಕು. ಅದು ನ್ಯಾಯಸಮ್ಮತವೇ ಅಲ್ಲವೆ ಎಂದು ಪರ್ಯಾಲೋಚಿಸಿ ನೀನೇ ತೀರ್ಮಾನಿಸಬೇಕು. ಸಾವಿರ ಮಂದಿ ಒಂದು ವಿಷಯವನ್ನು ತಿಳಿಯದವರಾದರೆ ಅವರ ಅಭಿಪ್ರಾಯಕ್ಕೆ ಏನೂ ಬೆಲೆಯಿಲ್ಲ. ಇದನ್ನು ನೀನು ನೆನಪಿನಲ್ಲಿಡು. ಇಚ್ಛಿಸುವವನು ಯೋಗಮಾರ್ಗದಲ್ಲಿ ನಡೆಯುವುದಕ್ಕೆ ಸ್ವಂತವಾಗಿ ಯೋಚಿಸುವುದನ್ನು ಕಲಿಯಬೇಕು. ಏಕೆಂದರೆ, ಪ್ರಪಂಚದಲ್ಲಿ ಅತ್ಯಂತ ಪ್ರಬಲವಾದ ಕೆಡುಕುಗಳಲ್ಲಿ ಕುರುಡು ನಂಬಿಕೆಯು ಒಂದು. ಈ ಸಂಕೋಲೆಯ ಹಿಡಿತದಿಂದ ನೀನು ಸಂಪೂರ್ಣವಾಗಿ ಬಿಡುಗಡೆಯನ್ನು ಹೊಂದಬೇಕು.
| ಜಿಡ್ಡು ಕೃಷ್ಣಮೂರ್ತಿ