ನಾನು ನಿಮ್ಮವನೇ

ನಾನು ನಿಮ್ಮವನೇ

ಕಳೆದು ಹೋಗಿದ್ದೇನೆ ದಯವಿಟ್ಟು ಹುಡಿಕಿಕೊಡಿ…

ಕಳೆದ ಒಂದು ವರ್ಷಗಳೇ ಕಳೆದಿರಬಹುದು ನನಗೆ ರಿಷಿಟ್ರೈಬ್ ಪರಿಚಯವಾಗಿ…..ನನಗೆ ಆಧ್ಯಾತ್ಮದ ಬಗೆಗಿನ ಸಣ್ಣ ಕುತೂಹಲ ಬೆಳೆದು ಹೆಮ್ಮರವಾಗಿದ್ದು ಇಲ್ಲಿಂದಲೇ….ರಿಷಿಟ್ರೈಬ್ ಪರಿಚಯವಾಗುವ ಮೊದಲು ಒಂದು ಅಧ್ಯಾಯವಾದರೆ ಅದರ ನಂತರದ್ದು ಅನನ್ಯ,ಅಭೂತಪೂರ್ವ ಅನುಭವ…
ಕಾಂಕ್ರೀಟ್ ಕಾಡಿನ ಒಂದು ಮೂಲೆಯಲ್ಲಿ ಸಣ್ಣದೊಂದು ಕಬ್ಬಿಣದ ಸರಳಿನ‌ ಬಾಗಿಲನ್ನು ದೂಡಿಕೊಂಡು ಒಳಹೊಕ್ಕಾಗ ದೊಡ್ಡದೊಂದು ತುಳಸಿಕಟ್ಟೆ ಅದರ ಮೇಲೆ ಒಂದೊಂದು ರೀತಿಯ ವಿಗ್ರಹಗಳು,ನೀರಿನ ಜೊತೆ ಪ್ರೀತಿಯನ್ನೇ ಸುರಿಸಿ ಸಾಕಿದ ಚಿಕ್ಕ ಚಿಕ್ಕ ಬೋನ್ಸಾಯ್ ಗಿಡಗಳು…ಅದೆಲ್ಲದಕ್ಕಿಂತಲೂ ನಾನೇನು ಕಮ್ಮಿ ಎಂದು ಬೀಗುವ ಬೇವಿನ‌ಮರದ ಗಾಳಿ ಜೊತೆಗೆ ಲೋಬಾನದ ಹೊಗೆ ನನ್ನೆದೆಯೊಳಗೆ ಆವರಿಸಿಬಿಟ್ಟಿತ್ತು…ಇದೆಲ್ಲವ್ವನ್ನು ನೋಡುತ್ತಾ ನನಗೇನೂ ಗೊತ್ತಿಲ್ಲದ ರೀತಿ ಹಿಂದೆ ಅಡಗಿ ಕುಳಿತಿರುವ ಪುರಾತನ ಗರಿಕೆಪ್ರಿಯ‌‌‌…ಇನ್ನೇನು ಇದರ ಅನುಭವ ಆಗುವಾಗಲೆ‌ ಈ ಶತಮಾನದ ಗಾಜಿನ ದೀಪಕ್ಕೆ ಪೈಪೋಟಿ ಕೊಡಲು ಸಿದ್ದವಾಗಿರುವ ಅವರ ಕಣ್ಣಿನ ತೇಜಸ್ಸು ನನ್ನನ್ನು ವಾಸ್ತವಕ್ಕೆ ಎಳೆದುಕೊಂಡು ಬರುವಲ್ಲಿ ಯಶಸ್ವಿಯಾಯಿತು…ಅವರ ಪ್ರೀತಿಯ ಆದರದ ಮಾತುಗಳನ್ನು ಕೇಳುತ್ತಾ ಬಂದವರ ಪರಿಚಯ ಮಾಡಿಕೊಂಡು ನನ್ನಷ್ಟಕ್ಕೆ ಕುಳಿತುಕೊಂಡು ಹೊಸದೊಂದು ಅನುಭವ ಪಡೆಯುವುದಕ್ಕೆ ಸಿದ್ಧವಾಗಿದ್ದೆ…ಕಷಾಯ ಕೊಟ್ಟ ಕೈಗಳನ್ನಂತು ಮರೆಯುವಂತೆ ಇಲ್ಲಾ..ಸಾಕ್ಷಾತ್ ಪ್ರೀತಿ,ಮಮಕಾರವೇ ಮನುಷ್ಯ ರೂಪದಲ್ಲಿ ಬಂದು ಕೊಟ್ಟ ಕಷಾಯ ಕುಡಿದು ಗುರುಗಳ ಹುಡುಕಾಟದಲ್ಲಿದ್ದೆ.ಒಳಗಿನಿಂದ ಸಣ್ಣದೊಂದು ತಾಳದ ಶಬ್ಧವಾಯಿತು..ಎಲ್ಲರು ಒಳಗೆ ಹೊಗಲು ತಯಾರಾದಾಗ ನನಗೆ ಗುರುಗಳು ಹೇಗಿರಬಹುದು ಎನ್ನುವ ಪ್ರಶ್ನೆ ಕಾಡತೊಡಗಿತ್ತು..ಬಾಗಿಲನ್ನು ಒಳಹೊಕ್ಕಿ ಎಡಕ್ಕೆ ತಿರುಗಿದಾಗ ಕುಳ್ಳಗಿನ ವ್ಯಕ್ತಿಯೊಬ್ಬರು ಬಟ್ಟೆಯಿಂದ ಹೆಣೆದು ಮಾಡಿದ ಚಾಪೆಯನ್ನು ಹಾಸಿದ 4/3ರ ಮರದ ಮಂಚದ ಮೇಲೆ ಪ್ರಶಾಂತವಾಗಿ ಕುಳಿತುಕೊಂಡು ಬಂದವರೊಡನೆ ಕುಶಲೋಪಚರಿಯನ್ನು ವಿವರಿಸುತ್ತಿದ್ದರೆ ನನಗೆ ಏನೋ ಒಂದು ರೀತಿಯ ದ್ವಂದ್ವ ಗಳು ಕಾಡಲಾರಂಬಿಸಿದವು..ಸಾಫ಼್ಟ್ ವೇರ್ ಉದ್ಯೋಗಿಯೊಬ್ಬರು ರುದ್ರಾಕ್ಷಿ ಧರಿಸಿ ಕೂತಂತೆ ಭಾಸವಾಯಿತು..ಅವರ ಕೈ ಮೇಲಿನ ಟ್ಯಾಟೂ ವೇ ಇಷ್ಟೆಲ್ಲಾ ಆಲೋಚನೆಗೆ ದಾರಿ ಮಾಡಿಕೊಟ್ಟಿದ್ದು…..ಎಂದು ಕೊನೆಗೆ ನನಗೆ ಅರ್ಥವಾಗಿದ್ದು…ಅಲ್ಲಿಂದ‌ ನನ್ನ ಆಧ್ಯಾತ್ಮದ ಬಗೆಗಿನ ಕುತೂಹಲ ಹಾಗೂ ನಾನು ಅಲ್ಪಸ್ವಲ್ಪ ಕಲಿತಿದ್ದು ಎಲ್ಲದಕ್ಕೂ ಪುಷ್ಟಿ ಸಿಕ್ಕಿದ್ದು,ಬೇರು ಆಳವಾಗಿ ನೆಲ ಸೇರಿದ್ದು..

ಕಲ್ಲು ದೇವರು ದೇವರಲ್ಲಾ
ಮಣ್ಣು ದೇವರು ದೇವರಲ್ಲಾ
ಮರ ದೇವರು ದೇವರಲ್ಲಾ
ಸೇತು ಭಂದ ರಾಮೇಶ್ವರ, ಗೋಕರ್ಣ ಆಷ್ಟಾಶಿಶ್ಟಿಂಗಳಲ್ಲಿರುವ ದೇವರೂ ದೇವರಲ್ಲಾ
ತನ್ನ ತಾನರಿತೊಡೆ ತಾನೇ ದೇವ ನೋಡಪ್ರಮಾಣ ಕೂಡಲಸಂಗಮದೇವ…
ಎನ್ನುವ ನಾ ಓದಿದ ಸಾಲುಗಳನ್ನು ಕ್ಷಣಾರ್ಧದಲ್ಲಿ ಅರ್ಥೈಸಿದ್ದರು ನನ್ನ ಗುರುಗಳು.. ಆ ವ್ಯಕ್ತಿಯ ವರ್ಚಸ್ಸೇ ಒಂದು ರೀತಿಯದ್ದಾದರೆ,ಅವರ ಹಾವಭಾವಗಳು ಇನ್ನೆನನ್ನೋ ಹೇಳುತ್ತಿದ್ದವು..ಒಟ್ಟಾರೆಯಾಗಿ ಹೇಳುವುದಾದರೆ ನಾನು ಅಲ್ಲಿ ಗುರುವನ್ನು ಕಂಡಿದ್ದಾಗಲಿ ನನಗಾದ ಅನುಭವವಾಗಲಿ ಹೇಳುವುದಕ್ಕಾಗುತ್ತಿಲ್ಲಾ‌…ದಿನಕಳೆದಂತೆ ಏನೇನೋ ಹೊಸ ಹೊಸ ಚಿಂತನೆ ಗಳನ್ನು ಹುಟ್ಟು ಹಾಕುವಲ್ಲಿ ಅವರು ಯಸಸ್ವಿಯಾಗಿದ್ದರು…ಯಾಕೆಂದರೆ ಅವರು ಕೇವಲ ವಿಷಯವನ್ನು ಕಲಿಸದೆ ನಾವೇ ಅರ್ಥ ಮಾಡಿಕೊಳ್ಳುವಂತೆ ಚಿಂತನೆಗಳನ್ನು ನಮಗೆ ನೀಡಿದ್ದು ವಿಶೇಷ… ನಾವೆಲ್ಲಾ ಅಲ್ಲಿ ಸೇರಿದ್ದು ಬೇರೆಲ್ಲೂ ಸಿಗದ ಸಂಜೀವಿನಿ ಭಸ್ತ್ರಿಕಾದಂತಹ ವಿದ್ಯೆಯೊಂದನ್ನು ಕಲಿಯಲು…
ಸಪ್ತಋಶಿಗಳ ಬಗೆಗಿನ ಅವರ ಹೇಳಿಕೆಯನ್ನಂತು ನಾನು ಅಷ್ಟು ಸುಲಭವಾಗಿ ನಂಬಲಾಗಿರಲಿಲ್ಲಾ..ಆದರೆ ಅದರ ಆಳಕ್ಕೆ ಕರೆದುಕೊಂಡು ಹೋಗಿ ಸಪ್ತಋಷಿ ಮಾರ್ಗದ ಬಗ್ಗೆ ನನಗೆ ನಂಬಿಕೆ ಬರುವಂತೆ ಮಾಡುವುದಕ್ಕೆ ನಮ್ಮ ಮಾರ್ಗದರ್ಶಿ ಗಳಿಗೆ ಹೆಚ್ಚೇನು ಸಮಯ ಹಿಡಿಯಲಿಲ್ಲಾ…ಎಲ್ಲಾ ವಿಷಯ,ಪ್ರಶ್ನೆ,ಕೌತುಕ,ಗಳಿಗೆಲ್ಲಾ ಒಂದೇಒಂದುಚೂರು ಚ್ಯುತಿ ಬರದಂತೆ ನಮಗೆ ತಿಳಿಸಿ…ಮಧ್ಯಾನದ ಊಟದಿಂದ ಹಿಡಿದು ಮಲಗುವ ಕೋಣೆಯವರೆಗು ಎಲ್ಲಾ ಜವಬ್ದಾರಿಗಳನ್ನು ನಿಭಾಯಿಸಿ ನಮ್ಮನ್ನು ಊರಿಗೆ ಕಳುಹಿಸಿ,ಕ್ಷೇಮವಾಗಿ ತಲುಪಿದ್ದೀರಾ ಎಂದು ಕೇಳುವವರೆಗೂ ನನಗೆ ಗುರುಗಳು ಹಾಗೂ ಅವರು ಕಲಿಸಿ ಕೊಟ್ಟವಿದ್ಯೆ ದೊಡ್ಡದಾದ ಪ್ರಶ್ನಾರ್ಥಕವಾಗಿ ಉಳಿದುಬಿಟ್ಟಿತ್ತು….ಮತ್ತೆ ಎಂದಿನಂತೆ ಕೆಲಸ ಕಾರ್ಯದಲ್ಲಿ ತೊಡಗಿ ಬಿಡುವಾದಾಗ ಧ್ಯಾನ ಮತ್ತು ಸಂಜೀಭಾ ಮಾಡಿಕೊಂಡಿದ್ದೆ…1 ರಿಂದ ಶುರುವಾಗಿ 2000 ದವರೆಗೆ ಬಂದು ನಿಲ್ಲುವ ಹೊತ್ತಿಗೆ ನಾನು ನನ್ನ ಜೀವಮಾನದಲ್ಲೆ ಅಂದುಕೊಂಡಿರದಿದ್ದ ಕೆಲವೊಂದು ಪವಾಡಗಳಿಗೆ ಸಾಕ್ಷಿ ಯಾದದ್ದು ಇವತ್ತು ಕಲ್ಪನೆಗೂ ಅಸಾಧ್ಯವಾದದ್ದು…ಗುರುಗಳು ಕಡ್ದಿ ಮುರಿದು ಹೇಳಿದ ಎಲ್ಲಾ ವಿಷಗಳು ನನ್ನ ಅನುಭವಕ್ಕೆ ಬಂದಿತ್ತು…
ಇವತ್ತು ಇಶ್ಟು ಬರೆಯುವುದಕ್ಕೆ ಕಾರಣ ಇಷ್ಟೆಲ್ಲಾ ಅನುಭವ ವಾದರೂ ಕೂಡ…ಸಾಧನೆಯ ಪರಿಣಾಮಗಳು( ಲಾಭ) ಗೊತ್ತಿದ್ದರೂ ಕೂಡ ನಾನು ಮೂರ್ಖನಂತೆ ಮತ್ತೆ ಈ ಬಣ್ಣದ ಜೀವನಕ್ಕೆ ವಶವಾಗುತ್ತಿದ್ದೇನೆ …ಮಾಡಲೇ ಬೇಕೆಂಬ ಆಸೆ ಇದ್ದರೂ..ಅವಕಾಶ ಇದ್ದರೂ ಆಲಸ್ಯ‌ ಹಾಗೂ ಚಟಗಳೇ ನನ್ನ ಅಧ್ಯಾತ್ಮದ ಹಾದಿಯನ್ನು ಹಿಂದಿಕ್ಕೆ ಮೇಲುಗೈ ಸಾಧಿಸಿದೆ….
ನಾಳೆ‌ಇಂದ ಮಾಡುವ
ಮುಂದಿನ ವಾರದಿಂದ ಮಾಡುವ
ಮತ್ತೆ ಮಾಡುವ ಎನ್ನುವ ಕಾರಣಗಳೆ ಗೆದ್ದು ಕೇಕೆ ಹಾಕುತ್ತಿದೆ…..
ನಿರ್ದಿಷ್ಟ ವಾದ ಗುರಿ ,ಗುರು ,ಅವಕಾಶ ಇದ್ದರೂ ಕೂಡ ನನ್ನ ಚಂಚಲ ಮನಸ್ಸೇ ಗೆಲ್ಲುತ್ತಿರುವುದು ಕಾಡುತ್ತಿರುತ್ತದೆ…..
ಆದರೂ ಮನಸ್ಸಿನಲ್ಲಿ ಚಿಕ್ಕದೊಂದು ಹುಳ ಗೂಡು ಕಟ್ಟಿದೆ…ನಾನೇನೋ ತಪ್ಪು ಮಾಡಿರಬಹುದೇನೋ,ಅದು ಋಷಿಗಳ ಕೋಪಕ್ಕೆ ಕಾರಣವಾಗಿರಬಹುದೋ ಅಥವ ಗುರುಗಳಿಗೆ ನನ್ನ ಮೇಲೆನಾದರೂ ಕೋಪ ಇರಬಹುದೇನೊ ಎನ್ನುವ ಒಂದು ಹುಳ….
ನಾನು ಗೊತ್ತಿದ್ದೋ ಗೊತ್ತಿಲ್ಲದೆಯೋ ತಪ್ಪು ಮಾಡಿದ್ದರೇ ದಯವಿಟ್ಟು ಕ್ಷಮಿಸಿ..ನನ್ನನ್ನು ಮತ್ತೆ ಸಾಧನೆಯ ದಾರಿಗೆ ಬರುವ ಹಾಗೇ ಏನಾದರು ಸಲಹೆ ಕೊಡಿ.

Blog Kannada by Prashant Kulal -Udupi